ಕ್ರಮಮುಕ್ತಿ	

ಮುಕ್ತಿಯ ಎರಡು ಪ್ರಕಾರಗಳಲ್ಲೊಂದು. ಇನ್ನೊಂದು ಜೀವನ್ಮುಕ್ತಿ. ಜೀವನ್ಮುಕ್ತ ಇಹದಲ್ಲೇ ಬ್ರಹ್ಮವೂ ಆತ್ಮವೂ ಒಂದೇ ಎಂಬ ಜ್ಞಾನವನ್ನು ಪಡೆದು ಮುಕ್ತನಾಗಿಬಿಡುತ್ತಾನೆ. ದೇಹವಿರುವವರೆಗೆ ಅದರ ಕಾರ್ಯಗಳು ಅವನನ್ನು ಬಂಧಿಸುವುದಿಲ್ಲ. ದೇಹ ಬಿದ್ದು ಹೋದಮೇಲೆ ಸಂಪೂರ್ಣವಾಗಿ ಬ್ರಹ್ಮದಲ್ಲಿ ಅವನು ಐಕ್ಯಹೊಂದುತ್ತಾನೆ. ಇದು ಜೀವನ್ಮುಕ್ತನ ವಿದೇಹಮುಕ್ತಿ.

ಕ್ರಮಮುಕ್ತಿ ಜೀವನ್ಮುಕ್ತಿಯಲ್ಲ. ಒಮ್ಮೆಯೇ ಈ ಜೀವನದಲ್ಲಿ ಪಡೆದ ಮುಕ್ತಿಯೂ ಅಲ್ಲ. ದೇಹ ಬಿದ್ದುಹೋದ ಕೂಡಲೆ ಪಡೆಯುವ ವಿದೇಹಮುಕ್ತಿಯೂ ಅಲ್ಲ. ಅದು ಜೀವಾನಂತರ ನಿಧಾನವಾಗಿ, ಹಂತಹಂತವಾಗಿ ಪಡೆಯುವ ಮುಕ್ತಿ. ಹೀಗೆ ಕ್ರಮವಾಗಿ ಪಡೆಯುವ ಮುಕ್ತಿಯೂ ಒಂದೇ ಬಗೆಯದಾಗಿಲ್ಲ. ಅದು ಬೇರೆ ಬೇರೆ ದರ್ಶನಗಳ ತತ್ತ್ವಕ್ಕನುಗುಣವಾಗಿ ಭಿನ್ನವಾಗಿದೆ. ಅದ್ವೈತ ದರ್ಶನದ ಪ್ರಕಾರ ಮುಕ್ತಿ ಎಂದರೆ ಬ್ರಹ್ಮೈಕ್ಯ. ಈ ಬ್ರಹ್ಮೈಕ್ಯ ಭಾವವನ್ನು ಸಶರೀರವಾಗಿ ಇಹದಲ್ಲೇ ಪಡೆಯುವ ಜೀವ, ತನ್ನ ಸಕಲ ಕರ್ಮವನ್ನೂ ಈಶ್ವರಪ್ರೀತಿಗಾಗಿ ನಿಷ್ಕಾಮದಿಂದ ಅರ್ಪಿಸಿ, ದೇವಯಾನದ ಮೂಲಕ ದೇವತೆಗಳ ಲೋಕವನ್ನು ಸೇರುತ್ತದೆ. ಕಾಮ್ಯ ಕರ್ಮವನ್ನು ಮಾಡುವ ಜೀವ ಪಿತೃಯಾನದ ಮೂಲಕ ಪಿತೃಲೋಕವನ್ನು ಸೇರುತ್ತದೆ. ಪಿತೃಲೋಕವನ್ನು ಸೇರಿದ ಜೀವರುಗಳು ತಮ್ಮ ಕರ್ಮಫಲ ತೀರಿದಮೇಲೆ ಕೆಳ ಅಂತಸ್ಥಿನ ಜೀವಿಗಳಾಗುತ್ತವೆ. ನಿಷ್ಕಾಮಕರ್ಮವನ್ನು ಅನುಸರಿಸಿದ ಜೀವರುಗಳು ಪುನಃ ಈ ಲೋಕಕ್ಕೆ ಹಿಂತಿರುಗುವುದಿಲ್ಲ. ಅಲ್ಲೇ ಇದ್ದು ಬ್ರಹ್ಮಜ್ಞಾನವನ್ನು ಪಡೆದು ಬ್ರಹ್ಮದಲ್ಲಿ ಐಕ್ಯವಾಗಿ ಪರಮಮುಕ್ತಿಯನ್ನು ಪಡೆಯುತ್ತಾರೆ. ಶಂಕರಾಚಾರ್ಯರು ಜೀವನ್ಮಕ್ತಿಯೊಂದಿಗೆ ಇದನ್ನೂ ಅಂಗೀಕರಿಸಿದ್ದಾರೆ. ಅವರ ಪ್ರಕಾರ ಈ ಮುಕ್ತಿಯೂ ಜೀವನ್ಮುಕ್ತಿಯಂತೆ ಬ್ರಹ್ಮೈಕ್ಯವೇ. ಆದರೆ ಇದು ಕಾಲಾಂತರದಲ್ಲಿ ಕ್ರಮವಾಗಿ ಪಡೆಯುವಂಥದು.

ರಾಮಾನುಜಾಚಾರ್ಯರು ಕ್ರಮಮುಕ್ತಿಯನ್ನು ಮಾತ್ರ ಅಂಗೀಕರಿಸುತ್ತಾರೆ. ಅವರ ಪ್ರಕಾರ ಕ್ರಮಮುಕ್ತಿ ಐಕ್ಯದಲ್ಲಿ ಕೊನೆಗೊಳ್ಳುವುದಿಲ್ಲ. ಆತ್ಮ ಪರಮಾತ್ಮದ ಅಂಶ ಮಾತ್ರವೇ. ಆದ್ದರಿಂದ ಅದು ಎಂದೆಂದಿಗೂ ಪರಮಾತ್ಮದಲ್ಲಿ ಐಕ್ಯಹೊಂದಲಾರದು ಎಂಬುದು ಅವರ ಮತ. ಆ ಆತ್ಮ ಪರಮಾತ್ಮದಂತೆ ಆಗುವುದೇ ಅದರ ಮುಕ್ತಿದೆಶೆ. ಈ ಮುಕ್ತಿದೆಶೆಯನ್ನು ಅದು ಇಹದಲ್ಲೆ, ಸಶರೀರವಾಗಿಯೇ ಪಡೆಯಲಾರದು. ಈ ಜನ್ಮದಲ್ಲಿ ನಿಷ್ಕಾಮಕರ್ಮವನ್ನು ಮಾಡಿ, ತಾನು ಈಶ್ವರನಿಗೆ ಸಂಪೂರ್ಣವಾಗಿ ಅಧೀನ ಎಂಬ ಜ್ಞಾನವನ್ನು ಪಡೆದುದರಿಂದ ಹುಟ್ಟಿದ ಭಕ್ತಿಯಿಂದ ತನ್ನನ್ನು ಸಂಪೂರ್ಣವಾಗಿ ಈಶ್ವರನಿಗೆ ಅರ್ಪಿಸಿಕೊಂಡು ಈ ಶರೀರ ಬಿದ್ದುಹೋದಮೇಲೆ ಆತ್ಮ ವೈಕುಂಠವಾಸಿಯಾಗುತ್ತದೆ. ಅಲ್ಲಿ ಪರಮಾತ್ಮನ ಸಹವಾಸ ಸಾಲೋಕ್ಯ, ಪರಮಾತ್ಮನಲ್ಲಿ ಸದಾ ನೆಟ್ಟನೋಟ, ಸಾಯುಜ್ಯ-ಇವುಗಳ ಮೂಲಕ ಅದಕ್ಕೆ ಪರಮಾತ್ಮನ ಸಾಮೀಪ್ಯ ದೊರೆಯುತ್ತದೆ. ಪರಮಾತ್ಮ ಅಂಥ ಮುಕ್ತಾತ್ಮನನ್ನು ಆಲಂಗಿಸುತ್ತಾನೆ. ಈ ಮೂರು ದೆಶೆಗಳ ಅನಂತರ ಮುಕ್ತಾತ್ಮ ನಿರಂತರ ಧ್ಯಾನದಿಂದ ಪರಮಾತ್ಮನಿಗೆ ಸದೃಶವಾದ ರೂಪವನ್ನು ಪಡೆಯುತ್ತಾನೆ. ಇದು ಸಾರೂಪ್ಯ ಮುಕ್ತಿ. ಎಲ್ಲಕ್ಕಿಂತ ಮೇಲಿನ ಮುಕ್ತಿ. ಆತ್ಮಕ್ಕೆ ಅದಕ್ಕಿಂತ ಹೆಚ್ಚಿನ ಮುಕ್ತಿ ಅಲ್ಲ.
(ನೋಡಿ- ಅದ್ವೈತ)
(ನೋಡಿ- ಜೀವನ್ಮುಕ್ತಿ)
(ನೋಡಿ- ಮುಕ್ತಿ) 				 (ಜಿ.ಎಚ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ